ಚುರುಚುರುಕೆ ಗಿಡ -
	ಆರ್ಟಿಕೇಸೀ ಕುಟುಂಬಕ್ಕೆ ಸೇರಿದ ಒಂದು ಬಹುವಾರ್ಷಿಕ ಕಾಡುಸಸ್ಯ (ಸ್ಟಿಂಗಿಂಗ್ ನೆಟಲ್). ಆರ್ಟಿಕ ಡಯಾಯಿಕ ಇದರ ಶಾಸ್ತ್ರೀಯ ಹೆಸರು. ಸಾಧಾರಣವಾಗಿ ಬಯಲು ಪ್ರದೇಶದಲ್ಲಿ ಕಂಡುಬರುತ್ತದೆ. ಸುಮರ 1 m ಎತ್ತರಕ್ಕೆ ಬೆಳೆಯುವ ಮೂಲಿಕೆ ಸಸ್ಯ ಇದು. ಪ್ರತಿಯೊಂದು ಗಿಣ್ಣಿನ ಮೇಲೆ 4 ಚಿಕ್ಕ ವೃಂತಪರ್ಣಗಳಿವೆ. ಎಲೆಗಳು ಸರಳರೀತಿಯವು. ಅವುಗಳ ಆಕಾರ ಅಂಡದಂತೆ ; ಉದ್ದ 5-7.5 ಸೆಂ.ಮೀ. ; ತುದಿ ಚೂಪು ; ಅಂಚು ಗರಗಸದಂತೆ ; ಎಲೆಗಳ ಹಾಗೂ ಕಾಂಡದ ಮೇಲೆ ಬಿರುಸಾದ ರೋಮಗಳಿವೆ. ಇವು ಏಕಕೋಶಿಗಳು. ಇವುಗಳ ತಳಭಾಗ ಅಂಡಾಕೃತಿಯದಾಗಿದ್ದು, ಮೇಲ್ಭಾಗ ಚಾವಟಿಯಂತಿದೆ. ಚಾವಟಿಯಂತಿರುವ ಭಾಗ ಮೈಗೆ ತಗುಲಿದಾಗ ಚರ್ಮದ ಒಳಹೊಕ್ಕು ಮುರಿಯುತ್ತದೆ. ತಳಭಾಗದಲ್ಲಿ ಅಂಡದಂತಿರುವ ಚೀಲದಲ್ಲಿ ಒಂದು ರೀತಿಯ ತೀಕ್ಷ್ಮರಸವಿದೆ. ಇದರಲ್ಲಿ ಅಸಿಟೈಲ್ ಕೋಲೀನ್ ಮತ್ತು ಹಿಸ್ಟಮೀನುಗಳಿವೆ ಯೆಂದು ತಿಳಿದು ಬಂದಿದೆ. ಈ ರಸ ದೇಹದೊಳಗೆ ಸೇರಿದಾಗ ಚುರುಗುಟ್ಟುವುದರಿಂದಲೇ ಈ ಸಸ್ಯಕ್ಕೆ ಚುರುಚುರಕೆ ಗಿಡ ಎಂದು ಹೆಸರು. ಇದರ ಕಾರ್ಯವಿಧಾನವನ್ನು ವೈದ್ಯರು ಉಪಯೋಗಿಸುವ ಪಿಚಕಾರಿಗೆ ಹೋಲಿಸಬಹುದು. ಹೂಗೊಂಚಲು ಅಂತ್ಯಾರಂಭಿ ಮಾದರಿಯದು ; ಇದರ ಉದ್ದ 10 ಸೆಂ.ಮೀ. ಹೂಗಳು ಸಣ್ಣವು ; ಏಕಲಿಂಗಿಗಳು ; ಆಕರ್ಷಕವಾಗಿಲ್ಲ. ಪತ್ರದಳಗಳು 4 ; ಕೇಸರುಗಳು 4 ; ಮೊಗ್ಗಿನಲ್ಲಿ ಒಳಾಭಿಮುಖವಾಗಿ ಬಾಗಿರುತ್ತವೆ. ಹೂ ಅರಳಿದಾಗ ಪರಾಗಕೋಶದಿಂದ ಪರಾಗ ಸಣ್ಣಮೋಡದಂತೆ ಮೇಲೇಳುತ್ತದೆ. ಅಂಡಾಶಯ ಉಚ್ಚಸ್ಥಾನದ್ದು ; ಒಂದೇ ಕೋಶವಿದೆ, ಕೋಶದಲ್ಲಿ ಒಂದೇ ಅಂಡಕವಿದೆ. ಫಲ ಎಕೀನ್ ರೀತಿಯದು. ಫಲಗಳಿರುವ ಹೂಗೊಂಚಲು ಅಧೋಮುಖವಾಗಿರುತ್ತದೆ. ಪತ್ರದಳಗಳು ಫಲದಲ್ಲೂ ಉಳಿದಿರುತ್ತವೆ. ಚುರುಚುರಕೆ ಗಿಡ ಹೆಚ್ಚು ಉಪಯುಕ್ತವಲ್ಲ. ಇದರ ಕೆಲವು ಬಗೆಗಳಿಂದ ತೆಗೆದ ನಾರನ್ನು ನೇಯ್ದು ಬಟ್ಟೆ ಮಾಡುತ್ತಾರೆ. ಇದರ ಕಷಾಯವನ್ನು ಕೇಶವರ್ಧಿನಿ ತಯಾರಿಕೆಯಲ್ಲಿ ಬಳಸುವುದುಂಟು.
(ಸಿ.ಆರ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ